ಕಾಸರಗೋಡು: ಓಣಂ ವಿಶೇಷ ಡ್ರೈವ್‌ನ ಭಾಗವಾಗಿ ಎಕ್ಸೈಸ್ ಇಲಾಖೆ ನಡೆಸಿದ ದಾಳಿಯಲ್ಲಿ ಕಾರಿನಲ್ಲಿ ಸಾಗಿಸಲು ಯತ್ನಿಸಿದ್ದ ವಿದೇಶಿ ಮದ್ಯ ಹಾಗೂ ಬಿಯರ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ.
ಇಂದು (ಗುರುವಾರ) ಮಧ್ಯಾಹ್ನ ಎರಡೂವರೆ ಗಂಟೆಯ ಸುಮಾರಿಗೆ ಮೀಂಜ ಬಜಂಗಳದಲ್ಲಿ ನಡೆಸಿದ ವಾಹನ ತಪಾಸಣೆಯ ವೇಳೆ ಈ ಮದ್ಯ ಕಳ್ಳಸಾಗಣೆ ಪತ್ತೆಯಾಗಿದೆ. ಮಂಜೇಶ್ವರ ಎಕ್ಸೈಸ್ ಚೆಕ್‌ಪೋಸ್ಟ್ ಸರ್ಕಲ್ ಇನ್ಸ್‌ಪೆಕ್ಟರ್ ಜಿ. ಕೃಷ್ಣಕುಮಾರ್ ಅವರ ನೇತೃತ್ವದ ತಂಡ ಹಾಗೂ ಕುಂಬಳೆ ಎಕ್ಸೈಸ್ ತಂಡವು ಜಂಟಿಯಾಗಿ ನಡೆಸಿದ ದಾಳಿಯಲ್ಲಿ 133.92 ಲೀಟರ್ ಕರ್ನಾಟಕ ಮದ್ಯ ಮತ್ತು 24 ಲೀಟರ್ ಬಿಯರ್ ಅನ್ನು ಕಾರಿನಿಂದ ವಶಪಡಿಸಿಕೊಳ್ಳಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಬಜ ದುರ್ಗ್ಗಿಪಳ್ಳ ನಿವಾಸಿ ಗಣೇಶ್ (43) ಎಂಬುವವರನ್ನು ಬಂಧಿಸಲಾಗಿದೆ. ವಶಪಡಿಸಿಕೊಂಡ ಸೊತ್ತುಗಳನ್ನು ಕಸ್ಟಡಿಗೆ ಪಡೆದು, ಆರೋಪಿಯ ವಿರುದ್ಧ ಅಬಕಾರಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ, ಪ್ರಕರಣದ ದಾಖಲೆಗಳು, ವಶಪಡಿಸಿಕೊಂಡ ವಸ್ತುಗಳು ಹಾಗೂ ಮಾದರಿ ಬಾಟಲಿಯನ್ನು ಕುಂಬಳೆ ಎಕ್ಸೈಸ್ ರೇಂಜ್ ಕಚೇರಿಗೆ ಹಸ್ತಾಯಿಸಲಾಗಿದೆ.
ಈ ದಾಳಿಯಲ್ಲಿ ಕುಂಬಳೆ ಎಕ್ಸೈಸ್ ಇನ್ಸ್‌ಪೆಕ್ಟರ್ ಕೆ.ವಿ. ಶ್ರವಣ್, ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ (ಗ್ರೇಡ್) ಎ.ಬಿ. ಅಬ್ದುಲ್ಲಾ, ಪ್ರಿವೆಂಟಿವ್ ಆಫೀಸರ್ ಮೊಯ್ದೀನ್ ಸಾದಿಕ್, ಸಿವಿಲ್ ಎಕ್ಸೈಸ್ ಅಧಿಕಾರಿಗಳಾದ ಕೆ. ದಿನೂಪ್, ವಿ.ಎಲ್. ಸಿನೀಶ್, ನಿಖಿಲ್ ಪವಿತ್ರನ್, ಟಿ. ರಾಜೇಶ್ ಹಾಗೂ ಸಿವಿಲ್ ಎಕ್ಸೈಸ್ ಆಫೀಸರ್ ಡ್ರೈವರ್‌ಗಳಾದ ದಿಜಿತ್ ಮತ್ತು ಕ್ರಿಸ್ಟಿನ್ ಭಾಗವಹಿಸಿದ್ದರು.
Tags
ಮಂಜೇಶ್ವರ


